ಟ್ರಿಪೊಲಿ 1

ಉತ್ತರ ಆಫ್ರಿಕದಲ್ಲಿರುವ ಲಿಬ್ಯ ದೇಶದ ಪ್ರಮುಖ ರೇವು ಪಟ್ಟಣ ಮತ್ತು ಜಂಟಿ ರಾಜಧಾನಿ (ಇನ್ನೊಂದು ರಾಜಧಾನಿ ಬೆಂಗಾಸಿ). ಸಿಸಿಲಿಯ ದಕ್ಷಿಣಕ್ಕೆ, ಮೆಡಿಟರೇನಿಯನ್ ಸಮುದ್ರತೀರದಲ್ಲಿ, ಬಂಡೆಯಿಂದ ಕೂಡಿದ ಭೂಶಿರದ ಮೇಲೆ, ಬೆಂಗಾಸಿಯಿಂದ ಪಶ್ಚಿಮಕ್ಕೆ 400 ಮೈ. (644 ಕಿಮೀ.) ದೂರದಲ್ಲಿ ಇದೆ. ಟ್ಯೂನೀಷಿಯದ ಗಡಿ ಇಲ್ಲಿಗೆ 100 ಮೈ. ದೂರದಲ್ಲಿದೆ. ಜನಸಂಖ್ಯೆ 3,43,928 (1971).

	ಟ್ರಿಪೊಲಿಯ ಪಶ್ಚಿಮದ ಅಂಚಿನ ವರೆಗೂ ಮರುಭೂಮಿ ಚಾಚಿಕೊಂಡಿದೆ. ಪೂರ್ವದಲ್ಲಿರುವ ಓಯಸಿಸ್ ಫಲವತ್ತಾಗಿಯೂ ಸುಂದರವಾಗಿಯೂ ಇದೆ. ಅಲ್ಲಿ ಕಾರಮಾನ್ಲಿಯನ್ ಸುಲ್ತಾನರ ಗೋರಿಗಳಿವೆ. ಸಮುದ್ರತೀರದ ಉದ್ದಕ್ಕೂ ಗೋಡೆಯೂ ತಾಳೆಮರಗಳ ಸಾಲುಗಳಿಂದ ಕೂಡಿದ ವಿಶಾಲವಾದ ರಸ್ತೆಯೂ ಇವೆ. ಸಮುದ್ರದ ಎಡೆಯಿಂದ ನೋಡಿದಾಗ 16ನೆಯ ಶತಮಾನದ ಸ್ಪ್ಯಾನಿಷ್ ಕೋಟೆ ಎದ್ದು ಕಾಣುತ್ತದೆ. 

	ಹಳೆಯ ಪಟ್ಟಣದಲ್ಲಿ ಅನೇಕ ಪ್ರಾಚೀನ ಕಟ್ಟಡಗಳುಂಟು. ಇವುಗಳಲ್ಲಿ ಪ್ರಮುಖವಾದುವು ಗುರ್ಗಿ ಮಸೀದಿ (1883) ಮತ್ತು ಅಷ್ಟಕೋನಾಕೃತಿಯ ಮಿನಾರತುಗಳಿಂದ ಕೂಡಿದ ಕಾರಾಮನ್ಲಿ ಮಸೀದಿ (1736). ಷಾಮಿಲಿ ಮಸೀದಿ 10ನೆಯ ಶತಮಾನದಲ್ಲಿ ನಿರ್ಮಿತವಾಯಿತು. 17ನೆಯ ಶತಮಾನದಲ್ಲಿ ಇದರ ಪುನನಿರ್ಮಾಣವಾಯಿತು. ಸುಂದರವಾದ ಕೆತ್ತನೆ ಕೆಲಸಗಳಿಂದ ಕೂಡಿದ ಬಿಳಿ ಅಮೃತಶಿಲೆಯ ಮಾರ್ಕಸ್ ಆರೀಲಿಯಸ್ ವಿಜಯ ಕಮಾರನು (163) ಇರುವುದು ಬಂದರಿನ ಹತ್ತಿರ.

	ಹಳೆಯ ಪಟ್ಟಣದ ನೈಋತ್ಯಕ್ಕಿರುವ ಹೊಸ ಪಟ್ಟಣ ವಿಶಾಲವಾದ್ದು. ಇದು ಉದ್ಯಾನಗಳಿಂದಲೂ ವಾಸಗೃಹಗಳಿಂದಲೂ ಕೂಡಿದೆ. ಇದರ ಮಧ್ಯಭಾಗದಲ್ಲಿ ರೋಮನ್ ಕ್ಯಾತೊಲಿಕ್ ಚರ್ಚೂ ನಗರದ ಹೊರವಲಯದಲ್ಲಿ ಇಂಗ್ಲಿಷ್ ಚರ್ಚೂ ಇವೆ. ಹಲವು ಕಚೇರಿಗಳೂ ರಂಗಮಂದಿರಗಳೂ ಹೋಟೆಲುಗಳೂ ಇರುವುದು ಆಡ್ರಿಯಾನ್ ಪೆಲ್ಟ್ ಮಾರ್ಗದಲ್ಲಿ. ಲಿಬ್ಯ ಸ್ವತಂತ್ರವಾದಾಗ ಟ್ರಿಪೊಲಿಯಲ್ಲಿದ್ದ ವಿಶ್ವಸಂಸ್ಥೆಯ ಡಚ್ ಪ್ರತಿನಿಧಿ ಪೆಲ್ಟನ ಹೆಸರನ್ನೇ ಈ ಮಾರ್ಗಕ್ಕೆ ಇಡಲಾಗಿದೆ.

	ಗೋಪುರಗಳಿಂದ ಕೂಡಿದ, ಮೂರ್ ಶೈಲಿಯ ಮುಂಭಾಗವುಳ್ಳ ಶ್ವೇತ ಅರಮನೆ ಅತ್ಯಂತ ಸುಂದರವಾದ್ದು. ಟ್ಯೂನಿಸ್ ಮತ್ತು ಬೆಂಗಾಸಿಗೆ ಸಾಗುತ್ತದೆ. ಹಲವು ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಪೂರ್ವದಿಂದ ಪಶ್ಚಿಮಕ್ಕೆ ಒಂದು ರೈಲುಮಾರ್ಗ ಇದರ ಮೂಲಕ ಸಾಗುತ್ತದೆ. ವಿಮಾನನಿಲ್ದಾಣ ಇರುವುದು ನಗರಕ್ಕೆ 21 ಮೈ. (34 ಕಿಮೀ.) ದಕ್ಷಿಣದಲ್ಲಿ, ಇಡ್ರಿಸ್ ಎಲ್ ಅವಲ್‍ನಲ್ಲಿ. ಅಲ್ಲಿ ಬ್ರಿಟಿಷ್ ವಾಯುಸೇನಾ ನೆಲೆಯಿದೆ. ಹ್ವೀಲಸ್ ಫೀಲ್ಡಿನಲ್ಲಿ 1950ರಿಂದ ಅಮೆರಿಕದ ಮಿಲಿಟರಿ ನೆಲೆಯಿದೆ.

	ನಗರದ ಆರ್ಥಿಕತೆಗೆ ಕೃಷಿ, ಪಶುಪಾಲನೆ ಮತ್ತು ಮೀನುಗಾರಿಕೆಗಳೇ ಅಡಿಪಾಯ. ತೀರದ ಉದ್ದಕ್ಕೂ ಸಿಗುವ ಉಪ್ಪನ್ನು ಧರ್ಮ ಹದಮಾಡಲು ಬಳಸುತ್ತಾರೆ ; ಇದರಲ್ಲಿ ಸ್ವಲ್ಪ ಭಾಗ ರಫ್ತಾಗುತ್ತದೆ. ಸಿಗರೇಟ್ ತಯಾರಿಕೆ, ಜಮಖಾನೆ ಮತ್ತು ರಗ್ಗುಗಳು, ನೇಯ್ಗೆ ಇವು ಎರಡು ಸಣ್ಣ ಕೈಗಾರಿಕೆಗಳು. ಎಸ್ಪಾರ್ಟೊಹುಲ್ಲು, ನೆಲೆಗಡಲೆ, ಆಲಿವ್ ಎಣ್ಣೆ, ಮೀನು, ಹಣ್ಣು-ಇವು ರಫ್ತುಗಳು. ಸಕ್ಕರೆ, ಆಹಾರ ಪದಾರ್ಥ, ಬಟ್ಟೆ, ಮೋಟಾರು, ಕೃಷಿ ಉಪಕರಣ ಆಮದಾಗುತ್ತವೆ. ಲಿಬ್ಯದ ವಿದೇಶಿ ವ್ಯಾಪಾರದಲ್ಲಿ ಮುಕ್ಕಾಲು ಭಾಗ ನಡೆಯುವುದು ಟ್ರೆಪೊಲಿಯ ಮೂಲಕ.

	ಪ್ರಾಚೀನ ಆಫ್ರಿಕನ್ ತ್ರಿಪುರಗಳಾದ ಎಯ, ಲೆಪ್ಟಿಸ್ ಮ್ಯಾಗ್ನ ಮತ್ತು ಸ್ಯಾಬ್ರತಗಳ ಪೈಕಿ ಎಯ ನಗರ ಮಾತ್ರ ಉಳಿದುಕೊಂಡು ಬಂತು. ಅದೇ ಇಂದಿನ ಟ್ರಿಪೊಲಿ. ಈ ನಗರಗಳನ್ನು ಕಟ್ಟಿದವರು ಫಿನಿಷಿಯನರು. 11ನೆಯ ಶತಮಾನದಲ್ಲಿ ಅರಬರು ದಾಳಿ ನಡೆಸಿದಾಗ ಲೆಪ್ಟಿಸ್ ಮ್ಯಾಗ್ನ ಮತ್ತು ಸ್ಯಾಬ್ರತ ನಾಶವಾದುವು. ಎಯ ನಗರದ ಪ್ರಾಮುಖ್ಯ ಬೆಳೆಯಿತು. ಅನಂತರದ ಇದು ಸ್ಪ್ಯಾನಿಷ್, ನಾರ್ಮನ್ ಮತ್ತು ತುರ್ಕರ ವಶದಲ್ಲಿತ್ತು. 1911-1943ರಲ್ಲಿ ಇದು ಇಟಾಲಿಯನರ ವಶದಲ್ಲಿದ್ದಾಗ ಅವರು ನಗರದಲ್ಲಿ ಯೋಜನಾಬದ್ಧವಾಗಿ ವಿಸ್ತಾರವಾದ ರಸ್ತೆಗಳನ್ನೂ ಉದ್ಯಾನಗಳನ್ನೂ ದೊಡ್ಡ ಕಟ್ಟಡಗಳನ್ನೂ ಚರ್ಚುಗಳೇ ಮುಂತಾದುವನ್ನೂ ನಿರ್ಮಿಸಿ ಇದನ್ನು ಸುಂದರವಾಗಿ ಮಾಡಿದರು. 1943ರಲ್ಲಿ ಇದು ಬ್ರಿಟಿಷರ ವಶಕ್ಕೆ ಬಂತು. 1951ರಲ್ಲಿ ಲಿಬ್ಯ ಸ್ವತಂತ್ರವಾದಾಗ ಟ್ರಿಪೊಲಿ ಅದಕ್ಕೆ ಸೇರಿತು.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ